ಕೋಯಿತ್ತಂಬುರಾನ್, ಕೇರಳವರ್ಮ ವಲಿಯ
1845-1915. ಕೇರಳದ ಹೊಸಹುಟ್ಟಿನ ಕಾಲದಲ್ಲಿ ಮಲಯಾಳಿ ಗದ್ಯಸಾಹಿತ್ಯದ ಅಭಿವೃದ್ಧಿಗೆ ಕಾರಣರಾದ ಮಹನೀಯರು. ಇಂಗ್ಲಿಷ್ ಭಾಷೆಯ ಪ್ರಭಾವ ಕೇರಳದ ಜನಜೀವನವನ್ನು ವಿವಿಧ ಶಾಖೆಗಳಲ್ಲಿ ಸಾರವತ್ತಾಗಿ ಸ್ಪರ್ಶಿಸತೊಡಗಿದ ಕಾಲದಲ್ಲಿ, ದಿನದಿಂದ ದಿನಕ್ಕೆ ಹೆಚ್ಚಿಕೊಳ್ಳುತ್ತಿದ್ದ ಪಾಠಶಾಲೆಗಳಲ್ಲಿದ್ದ ಇಂಗ್ಲಿಷಿನೊಂದಿಗೆ ಮಲಯಾಳಂ ಭಾಷೆಯನ್ನೂ ಕಲಿಸಬೇಕಾದ ತುರ್ತು ಅಗತ್ಯ ಉಂಟಾದುದರ ಪ್ರಯುಕ್ತ ಮಲಯಾಳಿ ಪಾಠಪುಸ್ತಕಗಳು ಬೇಕೇ ಬೇಕಾದವು. ಮಲಬಾರ್ ವಿಭಾಗದಲ್ಲಿ ಡಾ.ಗುಂಡರ್ಟ್ ತಿರುವಾಂಕೂರಿನಲ್ಲಿ ಸಿ.ಎಂ.ಎಸ್.ಪಾದ್ರಿ ಈ ಕೊರತೆಯನ್ನು ಪೂರೈಸಲು ಶ್ರಮಿಸತೊಡಗಿದರು. ಇಷ್ಟರಿಂದಲೇ ಸಾಕಷ್ಟು ಪುಸ್ತಕಗಳು ಲಭ್ಯವಾಗಲಿಲ್ಲ. ಹೀಗಾಗಿ ಇದರ ಪರಿಹಾರಕ್ಕೋಸ್ಕರ ತಿರುವಾಂಕೂರಿನ ಆಯಿಲ್ಯಂ ತಿರುನಾಳ್ ಮಹಾರಾಜರು (1861-1875) ಮತ್ತು ದಿವಾನ್ ಮಾಧವರಾಯರು ಒಟ್ಟುಗೂಡಿ ಒಂದು ಪಠ್ಯಪುಸ್ತಕ ಸಮಿತಿಯನ್ನು ರಚಿಸಿದರು. ಈ ಸಮಿತಿ ಕೇರಳವರ್ಮ ವಲಿಯ ಕೋಯಿತ್ತಂಬುರಾನರ ಅಧ್ಯಕ್ಷತೆಯ ತನ್ನ ಕಾರ್ಯಕಲಾಪವನ್ನು ಪ್ರಾರಂಭಿಸಿತು (1869). ಆಧುನಿಕ ರೀತಿಯ ಮಲಯಾಳ ಗದ್ಯ ರಚನೆಯ ತಳಹದಿಗೆ ಈ ಸಮಿತಿಯ ಕೆಲಸವೇ ಮೂಲಾಕಾರಣವಾಗಿ ಪರಿಣಮಿಸಿತೆನ್ನುವುದು ಗಮನಾರ್ಹವಾದ ಅಂಶ.

ಮಲಯಾಳಿಯಲ್ಲಿ ಮೊದಲನೆಯ, ಎರಡನೆಯ ಮತ್ತು ಮೂರನೆಯ ಪುಸ್ತಕಗಳನ್ನೂ ವಿಜ್ಞಾನಮಂಜರಿ, ತಿರುವಾಂಕೂರು ಚರಿತ್ರೆ, ಭಾರತದ ಚರಿತ್ರೆ, ಭೂವಿವರಣೆ, ಧನತತ್ತ್ವ ನಿರೂಪಣೆ-ಮೊದಲಾದ ಗ್ರಂಥಗಳನ್ನೂ ಕೋಯಿತ್ತಂಬುರಾನ್ ಪ್ರಕಟಿಸಿದರು. ಇವುಗಳ ರಚನೆಗೆ ಇಂಗ್ಲಿಷ್ ಗ್ರಂಥಕರ್ತರ ಮಾದರಿಗಳನ್ನೇ ಇವರು ಅನುಸರಿಸಿದ್ದರು. 1880ರಲ್ಲಿ ವಿಶಾಖಂ ತಿರುನಾಳರ ನಿರ್ದೇಶನದಂತೆ ಕೋಯಿತ್ತಂಬುರಾನರು ಅಕ್ಬರ್ ಎಂಬ ಡಚ್ ಕಾದಂಬರಿಯನ್ನು ಇಂಗ್ಲಿಷಿನಿಂದ ಮಲಯಾಳಕ್ಕೆ ಅನುವಾದ ಮಾಡಿದರು. ಇದೆಲ್ಲದರ ಪರಿಣಾಮವಾಗಿ ಮಲಯಾಳಿ ಗದ್ಯಸಾಹಿತ್ಯದಲ್ಲಿ ಆಧುನಿಕ ಅವಿಷ್ಕಾರಗಳು ತ್ವರಿತವಾಗಿ ಬರತೊಡಗಿದವು.

1882ರಲ್ಲಿ ಕೋಯಿತ್ತಂಬುರಾನ್ ಕಾಳಿದಾಸನ ಅಭಿಜ್ಞಾನ ಶಾಕುಂತಲವನ್ನು ಮಣಿಪ್ರವಾಳ ಶಾಕುಂತಳಂ ಎಂಬ ಹೆಸರಿನಲ್ಲಿ ಮಲಯಾಳಿಗೆ ತರ್ಜುಮೆ ಮಾಡಿದರು. ಈ ಅನುವಾದ ಶೈಲಿಯನ್ನು ಮುಂದಿನ ಪೀಳಿಗೆಯವರನೇಕರು ಅನುಕರಿಸಿದ್ದಾರೆ. ದ್ವಿತೀಯಾಕ್ಷರ ಪ್ರಾಸದ ವಿಷಯದಲ್ಲಿ ವಾದವಿವಾದಗಳು ಜರುಗುತ್ತಿದ್ದ ಸಂದರ್ಭವೊಂದರಲ್ಲಿ, ಕೋಯಿತ್ತಂಬುರಾನ್ ಬರೆದ ಮಯೂರ ಸಂದೇಶ ಹೊರಬಂತು. ದ್ವಿತೀಯಾಕ್ಷರ ಪ್ರಾಸದ ಸೌಷ್ಠವಕ್ಕೂ ಪ್ರಭಾವಕ್ಕೂ ಈ ಗ್ರಂಥ ಅತ್ಯುತ್ತಮ ಉದಾಹರಣೆಯಾಗಿದೆ. ಕೋಯಿತ್ತಂಬುರಾನರ ಕಾವ್ಯಶಕ್ತಿ ತನ್ನ ಪರಾಕಾಷ್ಠೆಯನ್ನು ಮುಟ್ಟಿರುವುದು ಮಯೂರಸಂದೇಶದಲ್ಲಿ. ಆದರೆ ಸ್ವತಂತ್ರ ಕವಿತೆಯೆಂಬ ಅರ್ಥದಲ್ಲಿ, ಕಾವ್ಯದ ಭಾವುಕತೆಯ ದೃಷ್ಟಿಯಲ್ಲಿ, ಉತ್ಕøಷ್ಟತೆಯ ದೃಷ್ಟಿಯಲ್ಲಿ ಮಯೂರಸಂದೇಶ ಶ್ರೇಷ್ಠಕೃತಿಯೆಂದು ಹೇಳುವಂತಿಲ್ಲ. ಶಬ್ದಾಲಂಕಾರ, ಅರ್ಥಾಲಂಕಾರಗಳ ದೃಷ್ಟಿಯಿಂದ ನೋಡಿದಾಗ, ವಾಚಕರನ್ನು ಬೆರಗುಗೊಳಿಸುವ ಶಕ್ತಿ ಅದಕ್ಕಿದೆಯೆಂದು ಹೇಳಬೇಕು. ಯಾವುದೋ ಕಾರಣದಿಂದ ರಾಜನ ಶಿಕ್ಷೆಗೆ ಗುರಿಯಾಗಿ ಕಾರಾಗೃಹವಾಸ ಅನುಭವಿಸಬೇಕಾಗಿ ಬಂದ ಕೋಯಿತ್ತಂಬುರಾನ್, ಹರಿಪ್ಪಾಡ್ ಎಂಬಲ್ಲಿಂದ ಒಂದು ನವಿಲಿನ ಮೂಲಕ ತಿರುವನಂತಪುರದಲ್ಲಿರುವ ತಮ್ಮ ಪ್ರೇಯಸಿಗೆ ಕಳುಹಿಸಿರುವ ಸಂದೇಶವೇ ಆ ಕಾವ್ಯದ ವಸ್ತು. ಕಾಳಿದಾಸನ ಮೇಘಸಂದೇಶಕ್ಕಿಂತ ಉತ್ತಮವೆಂದೇನೂ ಇದರ ಬಗೆಗೆ ಹೇಳುವಂತಿಲ್ಲ. ಆದರೂ ಈ ಕೃತಿ ಮುಂದೆ ಬರಲಿದ್ದ ಮಲಯಾಳಿ ಕಾವ್ಯಶೈಲಿಯ ಮೇಲೆ ತನ್ನದೇ ಆದ ಪ್ರಭಾವ ಮುದ್ರೆಯೊತ್ತಿತೆಂಬ ಅಂಶವನ್ನು ಕಡೆಗಣಿಸುವಂತಿಲ್ಲ.
ಕೋಯಿತ್ತಂಬುರಾನರ ಇತರ ಪ್ರಮುಖ ಕೃತಿಗಳೆಂದರೆ-ಅನ್ಯಾಪದೇಶ ಶತಕಂ ಮತ್ತು ಅಮರುಕ ಶತಕಂ. (ಕೆ. ಕೆ. ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ